ಭಾನುವಾರ, ಮೇ 16, 2021

ಮನವೇ ದೇವಾಲಯ

ಅದೊಂದು ಕಾಡಂಚಿನ  ಗ್ರಾಮ.  ತಮ್ಮಗಳ ಯಾವುದೇ ವ್ಯಾಜ್ಯಗಳನ್ನೂ ಹಳ್ಳಿಯ ಪರಿಧಿ ಮೀರದೆ, ಮಾರಮ್ಮನನ್ನು ಸಾಕ್ಷಿಯಾಗಿಸಿಕೊಂಡು, ಗುಡಿಯ ಪೂಜಾರಪ್ಪ ಹೇಳುವ ತೀರ್ಪನ್ನು / ಧನಾತ್ಮಕ ಶಿಕ್ಷೆಯನ್ನು ನಿರ್ವಿವಾದವಾಗಿ ಒಕ್ಕೊರಲಿನಿಂದ ಒಪ್ಪಿಕೊಳ್ಳುವ ಸ್ವಾವಲಂಬಿ ಸಮೂಹವದು.

ಆದರೆ ಗ್ರಾಮದಲ್ಲಿದ್ದ ಯುವ ಶಿಕ್ಷಕರೊಬ್ಬರು, ಕಾನೂನಿನ ಚೌಕಟ್ಟಿಗೊಳಪಡದೆ ನ್ಯಾಯವು ಇತ್ಯರ್ಥವಾಗುತ್ತಿದ್ದ ಈ ಸಂಪ್ರದಾಯವನ್ನು ಪ್ರಶ್ನಿಸುತ್ತಾ, ಹಳ್ಳಿಯು ಆಧುನಿಕ ಜಗತ್ತಿನಿಂದ ತೀರಾ ಹಿಂದುಳಿಯುತ್ತಿರುವುದಾಗಿಯೂ, ಇಲ್ಲಿ ನೀಡುವ ದಂಡನೆಯು ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಯಷ್ಟೇ ಬಾಲಿಶವಾಗಿದೆ ಎಂದು ಕುಹುಕವಾಡುತ್ತಿರುತ್ತಾರೆ.

ಕಾಲಕ್ರಮೇಣ ಶಿಕ್ಷಕರ ಹಗುರ ಮಾತುಗಳು ಅಲ್ಲಿಯ ಜನರ ಮನಸುಗಳನ್ನು ಭಾರವಾಗಿಸಿ, ಕುಟುಂಬ ಸಮೇತ ಶಿಕ್ಷಕರನ್ನು ಗ್ರಾಮದಿಂದ ಹೊರಗಿಡುವಂತಾಗುತ್ತದೆ.  ಒಂದು ವೇಳೆ ಆ ಕುಟುಂಬವು ಹಳ್ಳಿಗೆ ಹಿಂತಿರುಗುವ ಮನಸ್ಸು ಮಾಡಿದರೆ,  ಜನರ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದುದರ ಪ್ರಾಯಶ್ಚಿತ್ತವಾಗಿ ಮರದಡಿಯ ಮಾರಮ್ಮನಿಗೆ  ಶಾಶ್ವತ ಸೂರು ಕಟ್ಟಿಸಿ ಕೊಡಬೇಕು ಎಂಬ ಫರ್ಮಾನು ಹೊರಡಿಸಲಾಗುತ್ತದೆ.

ವರ್ಷಗಳು ಉರುಳಿದವು.  ಅತ್ತ ಮಹಾನಗರದ ನ್ಯಾಯಾಲಯ ಒಂದರಲ್ಲಿ ಕುಕೃತ್ಯವೊಂದರ ವಿಚಾರಣೆ ನಡೆಸಿ, ಅಲ್ಲಿನ  ನ್ಯಾಯಾಧೀಶರು ಆರೋಪಿಗೆ ಮರಣ ದಂಡನೆ ವಿಧಿಸಿ, ಆತನ ದೇಹಾಂತ್ಯವಾಗಿರುತ್ತದೆ.  ಆದರೆ ಮರಣದಂಡನೆಗೆ ಒಳಗಾದ ದುರ್ದೈವಿಯ ಮಗಳು ಬಹಳ ಹೋರಾಡಿ ತನ್ನ ತಂದೆಯು ನಿರಪರಾಧಿಯೆಂದು ಸಾಕ್ಷಿ ಸಮೇತ ಸಾಬೀತು ಪಡಿಸುತ್ತಾಳೆ.

ತನ್ನಿಂದ ಅನ್ಯಾಯವಾಗಿ ಒಂದು ಜೀವ ಬಲಿಯಾದುದನು ಮನಗಂಡು, ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಪಾಪಪ್ರಜ್ಞೆ ಕಾಡುತ್ತಲೇ ಖಿನ್ನತೆ ಗೊಳಗಾಗುತ್ತಾರೆ.

ಆಸ್ಪತ್ರೆಯ ಚಿಕಿತ್ಸೆಯು ನಿರೀಕ್ಷಿತ ಮಟ್ಟದಲ್ಲಿ ಫಲಕಾರಿಯಾಗದ ತರುವಾಯ, ಪತ್ನಿ ಹಾಗೂ ಮಕ್ಕಳು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಾ ಹತ್ತು ಹಲವು ದೇವಾಲಯಗಳ ಮೊರೆಯಿತ್ತರು.

ಹೀಗಿರುವಾಗ ಹಿತೈಷಿಯೋರ್ವರ ಸಲಹೆಯಂತೆ ಪರಿಹಾರಕ್ಕಾಗಿ ಪರಿವಾರ ಸಮೇತ ಕಾಡಂಚಿನ ಮಾರಮ್ಮನ ಗುಡಿಗೆ ಬರುತ್ತಾರೆ.  ಘಟನಾವಳಿಯ ಸಂಕೀರ್ಣತೆ ಅರಿತ ಪೂಜಾರಪ್ಪ, ನ್ಯಾಯಾಧೀಶರನ್ನು ಸಂತೈಸುತ್ತಾ...

ಅಂದಿನ ತೀರ್ಪು ಆ ದಿನದ ನಿರ್ದಿಷ್ಟ ಪುರಾವೆಗಳ ಮೇಲೆ ಅವಲಂಬಿತವೇ ಹೊರತು, ನಿಮ್ಮಯ ಅಸಾಮರ್ಥ್ಯದ ಫಲವಲ್ಲ.  ಮಾನವನ ಬೌದ್ಧಿಕತೆಯು ವಿಕಸನ ಹೊಂದುವಾಗಲೆಲ್ಲ, ಅವನಿಗೆ ಅವನೇ ಹಳತಾಗಿ ಬಿಡುತ್ತಾನೆ ಅಥವ ತಪ್ಪಾಗಿ ಬಿಡುತ್ತಾನೆ.  ವಿಕಸನದ ಹಾದಿಗೆ ಅನುಗುಣವಾಗಿ ಕೇವಲ ತಾರ್ಕಿಕವಾಗಿ (ಸಾಕ್ಷ್ಯಗಳನ್ನು ಸಂಗ್ರಹಿಸಿ) ವಿಶ್ಲೇಷಿಸಿ, ಯಾವುದೇ ತತ್ವಗಳಲ್ಲಿ ನಂಬಿಕೆಯಿಲ್ಲದೇ ನೀಡುವ ತೀರ್ಪುಗಳ ಸಾಲಿನಲ್ಲಿ ಇದು ಮತ್ತೊಂದು ಸೇರ್ಪಡೆಯಷ್ಟೇ.

ಆದರೆ ನಮ್ಮಲ್ಲಿ ಎರಡು ಕಡೆಯ ಕಕ್ಷಿದಾರರನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಿ, ಮುಕ್ತ ಮನಸಿನಿಂದ ಮಾರಮ್ಮನನ್ನು ಸಾಕ್ಷಿಯಾಗಿರಿಸಿ ತತ್ವಜ್ಞಾನ ಆಧಾರಿತ ತೀರ್ಪನ್ನು ನೀಡುತ್ತೇವೆ.  ಶಿಕ್ಷೆ ಎಂಬುದು ಸನ್ನಡತೆಯ ನಾಂದಿಯಾಗಬೇಕೆ ಹೊರತು, ಹಗೆತನ ಸೂಸುವ ಜ್ವಾಲಾಮುಖಿಯಲ್ಲ. ಬಾಪು ಹೇಳಿದಂತೆ ಒಂದು ಕಣ್ಣಿಗೆ ಇನ್ನೊಂದು ಕಣ್ಣು ತೆಗೆದರೆ, ಜಗವೇ ಕುರುಡಾಗುತ್ತದಲ್ಲವೇ?  ಕೊಲೆಗಾರನಿಗೆ ಮರಣದಂಡನೆಯೇ ಶಿಕ್ಷೆಯಾದರೆ ನಮಗೂ ಅವನಿಗೂ ವ್ಯತ್ಯಾಸವೇನು?  ಕಠಿಣ ನಿಯಮಾವಳಿಗಳು ಜನರ ಮಧ್ಯೆ ಭಯವನ್ನು ಹುಟ್ಟಿಸುತ್ತದೆಯೇ ವಿನ, ಅವರ ಸುಪ್ತ ಮನಸ್ಸಿನಲ್ಲಿರುವ ದುರ್ನಡತೆಯ ನಿರ್ಮೂಲನೆ ಮಾಡುವುದಿಲ್ಲ.

ಮನುಷ್ಯನ ಯಾವುದೇ ಆವಿಷ್ಕಾರದ ಮೂಲ ಉದ್ದೇಶವು ಅವನ ಬದುಕನ್ನು ಮತ್ತಷ್ಟು ಸುಂದರಗೊಳಿಸುವುದಾದರೆ, ನ್ಯಾಯ/ ನ್ಯಾಯಾಲಯ ಅದರ ಮೇರು ಶಿಖರ.  ನ್ಯಾಯವೆಂಬುದು ಎಂದಿಗೂ ದಂಡನೆಯ ಕಚ್ಚಾ ವಸ್ತುವಲ್ಲ.  ಪಶ್ಚಾತ್ತಾಪಕ್ಕಿಂತಲೂ ಮಿಗಿಲಾದ ದಂಡನೆಯೂ ಇಲ್ಲ. ಮನವೇ ದೇವಾಲಯವಾದರೇ, ಮಾನವೀಯತೆಯೇ ಅದರ ಮೂಲ ದೇವರು ಎಂದು ಹೇಳುತ್ತಿದ್ದಂತೆ...

ಚೊಚ್ಚಲ ಬಾರಿಗೆ ಬಂಧನ ಮುಕ್ತತೆಯ ಸಾಕ್ಷಾತ್ಕಾರವಾಗಿ, ತುಂಬಿ ಬಂದ ಸಂತಸಗಂಬನಿಗಳಿಂದ ಪೂಜಾರಪ್ಪನಿಗೆ ಪಾದ ಪೂಜೆ ಸಲ್ಲಿಸಿ, ಮನೆಯತ್ತ (ಹೊಸ) ಮುಖ ಮಾಡಿ, ಮುಂದೊಂದು ದಿನ ಭವ್ಯವಾದ ದೇವಾಲಯವನ್ನು "ನ್ಯಾಯ ದೇಗುಲವಿದು, ಕೈ ಮುಗಿದು ಒಳಗೆ ಬಾ" ಎಂಬ ಫಲಕದೊಂದಿಗೆ ಕಟ್ಟಿಸುತ್ತಾರೆ, ಮರದಡಿಯ ಮಾರಮ್ಮನಿಗೆ... ಸಂತುಷ್ಟನಾದ ಆ ಶಿಕ್ಷಕರ ಮಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ